ಬಾರಕ್‍ಪುರ
ಪಶ್ಚಿಮ ಬಂಗಾಲದ ಒಂದು ಪಟ್ಟಣ. ಇದನ್ನು ಬ್ಯಾರಕ್‍ಪುರ್ ಎಂದೂ ಕರೆಯುವುದುಂಟು. ಕಲ್ಕತ್ತದ ಉತ್ತರಕ್ಕೆ ಸುಮಾರು 25 ಕಿಮೀ ದೂರದಲ್ಲಿ ಹೂಗ್ಲಿನದಿಯ ಎಡದಂಡೆಯ ಮೇಲಿದೆ. ಕಲ್ಕತ್ತ ಮಹಾನಗರಕ್ಕೆ ಸಮೀಪವಾಗಿರುವುದರಿಂದ ಮತ್ತು ಬ್ರಿಟಿಷರ ಕಾಲದಲ್ಲಿ 1772ರಿಂದ ಸೈನಿಕ ನೆಲೆಯಾಗಿದ್ದುದರಿಂದ ಈ ಪಟ್ಟಣ ಬೆಳೆಯಿತು. ಅಲ್ಲದೆ ಇಲ್ಲಿ ನಡೆದ ಎರಡು ಸೈನಿಕ ಹೋರಾಟದಿಂದಾಗಿ ಈ ಪಟ್ಟಣ ಪ್ರಸಿದ್ಧವಾಯಿತು. ಜನಸಂಖ್ಯೆ 1,15,516 (1981).

ಬಾರಕ್‍ಪುರದ ದಂಗೆ ಎಂದು ಕರೆಯುವ ಈ ಸೈನಿಕ ಹೋರಾಟ ಪ್ರಥಮವಾಗಿ 1824ರಲ್ಲೂ ಎರಡನೆಯದಾಗಿ 1857ರಲ್ಲೂ ನಡೆಯಿತು.

1824ರಲ್ಲಿ ಭಾರತೀಯ ಸೈನಿಕ ಕಾಲ್ದಳ ಪ್ರಥಮ ಆಂಗ್ಲೊ-ಬರ್ಮಿಯರ ಯುದ್ಧದಲ್ಲಿ (1824-26) ಭಾಗವಹಿಸಲು ಹೋಗುವ ಸಿದ್ಧತೆಯಲ್ಲಿ ಬಾರಕ್‍ಪುರದಲ್ಲಿ ತಂಗಿತ್ತು. ಆಗಿನ ನಿಯಮಗಳ ಪ್ರಕಾರ ಭಾರತೀಯ ಸೈನಿಕರು ತಮ್ಮ ಸ್ವಂತ ವಸ್ತುಗಳನ್ನು ಸಾಗಿಸುವ ಏರ್ಪಾಡನ್ನು ತಾವೇ ಮಾಡಿಕೊಳ್ಳಬೆಕಾಗಿತ್ತು. ಸಾಗಣೆ ಬಾಡಿಗೆ ಬಲು ದುಬಾರಿಯಾಗಿದ್ದುದರಿಂದ ಆ ಸಾಗಣೆ ವೆಚ್ಚವನ್ನು ಸರ್ಕಾರ ವಹಿಸಿಕೊಳ್ಳಬೇಕೆಂದು 47ನೆಯ ಕಾಲ್ದಳದ ಭಾರತೀಯ ಸೈನಿಕರು ಅಧಿಕಾರಿಗಳನ್ನು ಕೇಳಿಕೊಂಡರು. ಸಮುದ್ರಯಾನ ಮಾಡುವುದರಿಂದ ತಮ್ಮ ಧರ್ಮಚ್ಯುತಿಯಾಗುವುದೆಂದು ಕೆಲವು ಹಿಂದು ಸೈನಿಕರು ಅದಕ್ಕೆ ಅಸಮ್ಮತಿ ಸೂಚಿಸಿದರು. ಭಾರತೀಯ ಸೈನಿಕರಿಗೆ ಬಡ್ತಿ ನೀಡಿಕೆಯಲ್ಲಿ ಆಗಿರುವ ಲೋಪಗಳನ್ನು ಎತ್ತಿತೋರಿಸಿದರು. ಆದರೆ ಸರ್ಕಾರ ಈ ಕುಂದುಕೊರತೆಗಳನ್ನು ಪರಿಹರಿಸಲು ಪ್ರಯತ್ನಿಸಲಿಲ್ಲ. ಇದರಿಂದ ನಿರಾಶರಾದ ಸೈನಿಕರು ತಮ್ಮ ಅಸಮಾಧಾನವನ್ನು ವಿವಿಧ ರೂಪದಲ್ಲಿ ತೋರಿಸಿಕೊಳ್ಳತೊಡಗಿದರು. 1824 ಅಕ್ಟೋಬರ್ 30ರಂದು ಕವಾಯತಿಗಾಗಿ ಸೇರಿದಾಗ ಸೈನಿಕರು ಬೆನ್ನು ಚೀಲವನ್ನು ಧರಿಸಿರಲಿಲ್ಲ. ಅವರು ಅವು ಉಪಯೋಗಿಸುವ ಸ್ಥಿತಿಯಲ್ಲಿಲ್ಲವೆಂದು ಮೇಲಧಿಕಾರಿಗಳಿಗೆ ಉತ್ತರಿಸಿದರು. ನವೆಂಬರ್ 1ರಂದು ನಡೆದ ಕವಾಯತಿನಲ್ಲಿ ಯೋಧರು ಬಹಿರಂಗವಾಗಿ ಹಿಂಸಾಚಾರಕ್ಕಿಳಿದರು. ಮುಂದಿನ ಕವಾಯತಿನ ದಿವಸ ಆಂಗ್ಲ ಸೈನ್ಯಾಧಿಕಾರಿ ಕಲ್ಕತ್ತದಿಂದ ಬ್ರಿಟಿಷರೇ ಇದ್ದ ಸೈನ್ಯವನ್ನು ಕರೆಸಿ ಭಾರತೀಯ ಯೋಧರ ಮೇಲೆ ಗುಂಡು ಹೊಡೆಸಿದ. ಸ್ಥಳದಲ್ಲೆ 60 ಜನ ಭಾರತೀಯ ಸೈನಿಕರು ಸತ್ತರು; ಹತ್ತಾರು ಜನರನ್ನು ಗಲ್ಲಿಗೇರಿಸಲಾಯಿತು. ಅನಂತರ 47 ನೆಯ ಕಾಲ್ದಳವನ್ನು ವಿಸರ್ಜಿಸಲಾಯಿತು. ಆದರೆ ಈ ಕಹಿ ನೆನಪು ಭಾರತೀಯ ಯೋಧರ ಮತ್ತು ಜನರ ಮನದಲ್ಲಿ ಉಳಿಯಿತು.

ಎರಡನೆಯ ಬಾರಕ್‍ಪುರದ ದಂಗೆ 1857ರಲ್ಲಿ ಆಸ್ಫೋಟಿಸಿತು. ಆಗ 34ನೆಯ ಭಾರತೀಯ ಸೈನಿಕ ಕಾಲ್ದಳ ಅಲ್ಲಿ ತಂಗಿತ್ತು. ಸೈನ್ಯದಲ್ಲಿ ಬಳಸುವ ತೋಟಾಗಳಿಗೆ ದನ ಅಥವಾ ಹಂದಿಯ ಕೊಬ್ಬನ್ನು ಸವರಲಾಗುತ್ತದೆಂಬ ವದಂತಿ ದಟ್ಟವಾಗಿ ಹಬ್ಬಿತ್ತು. ಅದು ತಮ್ಮ ಧರ್ಮವಿರೋಧಿ ಎಂದು ಸೈನಿಕರು ಪ್ರತಿಭಟಿಸಿದರು. ಅದೇ ಬಗೆಯ ಅಸಮಾಧಾನ ಇತರೆಡೆಗಳ ಭಾರತೀಯ ಸೈನಿಕರಲ್ಲೂ ಮನೆ ಮಾಡಿತ್ತು. ಅವರು ಈ ಬಗ್ಗೆ ಮೇಲಧಿಕಾರಿಗಳ ಮೂಲಕ ಸಲ್ಲಿಸಿದ ಮನವಿಗಳನ್ನು ಬ್ರಿಟಿಷ್ ಆಡಳಿತ ಉಪೇಕ್ಷಿಸಿತು. 1857 ಮಾರ್ಚ್ 29ರಂದು ಮಂಗಳಪಾಂಡೆ ಎಂಬ ಯೋಧ ಇದನ್ನು ಪ್ರತಿಭಟಿಸಿ ಇಬ್ಬರು ಆಂಗ್ಲ ಅಧಿಕಾರಿಗಳ ಮೇಲೆ ಗುಂಡು ಹಾರಿಸಿ ಘಾಸಿಗೊಳಿಸಿದ. ಈ ಬಗೆಯಲ್ಲಿ ಪ್ರಾರಂಭವಾದ ದಂಗೆಯನ್ನು ಬ್ರಿಟಿಷರು ನಿರ್ದಯರಾಗಿ ತಹಬದಿಗೆ ತಂದು 34ನೆಯ ದೇಶೀಯ ಕಾಲ್ದಳವನ್ನೂ ವಿಸರ್ಜಿಸಿದರು. 1857ರ ಭಾರತೀಯ ಪ್ರಥಮ ಮಹಾ ಸ್ವಾತಂತ್ರ್ಯ ಹೋರಾಟಕ್ಕೆ ಇದು ಮುನ್ಸೂಚನೆಯಾಗಿತ್ತು. ಈ ಎಲ್ಲ ದಂಗೆಗಳಿಗೆ ಬ್ರಿಟಿಷರ ತಾರತಮ್ಯ ನೀತಿ, ನಿರ್ದಯತೆ ಮತ್ತು ಉದಾಸೀನತೆ ಕಾರಣವಾಗಿದ್ದುವು.
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ